ಟಿಬೆಟ್ -
ಚೀನೀ ಸಮಾಜವಾದಿ ಗಣರಾಜ್ಯದ ಒಂದು ಸ್ವಯಮಾಡಳಿತ ಪ್ರದೇಶ. ಮಧ್ಯ ಏಷ್ಯದಲ್ಲಿ ಸ್ಥೂಲವಾಗಿ ಪೂ.ರೇ. 74ಲಿ-100ಲಿ ಮತ್ತು ಉ.ಅ. 27ಲಿ-37ಲಿ ನಡುವೆ ಹಬ್ಬಿರುವ ಪ್ರಸ್ಥಭೂಮಿಯ ಮೇಲೆ ಇದೆ. ಉತ್ತರದಲ್ಲಿ ಷಿಂಜೀಯಾಂಗ್ ವೀಗುರ್ ಹಾಗೂ ಚಿಂಗೈ, ಪೂರ್ವದಲ್ಲಿ ಸೆಚ್‍ವಾನ್, ಆಗ್ನೇಯದಲ್ಲಿ ಯೂನ್ನಾನ್ ಮತ್ತು ಬರ್ಮ, ದಕ್ಷಿಣದಲ್ಲಿ ಭಾರತ, ನೇಪಾಳ, ಮತ್ತು ಭೂತಾನ, ಪಶ್ಚಿಮದಲ್ಲಿ ಭಾರತ-ಇವು ಇದರ ಮೇರೆಗಳು. ವಿಸ್ತೀರ್ಣ 4,71,660 ಚ.ಮೈ. (12,21,601 ಚ.ಕಿಮೀ.). ಜನಸಂಖ್ಯೆ 14,00,000 (1968 ಅಂ.). ರಾಜಧಾನಿ ಲಾಸ.

ಭೂವಿಜ್ಞಾನ : ಟಿಬೆಟ್ ಪ್ರಸ್ಥಭೂಮಿ ಮೆಸೊeóÉೂೀಯಿಕ್ ಮತ್ತು ಸೀನೊeóÉೂೀಯಿಕ್ ಭೂಯುಗಗಳಲ್ಲಿ ರೂಪುಗೊಂಡ ಪ್ರದೇಶ ; ಭೂವೈಜ್ಞಾನಿಕವಾಗಿ ಈಚಿನದು. ಲಕ್ಷಾಂತರ ವರ್ಷಗಳ ಹಿಂದೆ ಪರ್ವತಗಳಿರಲಿಲ್ಲ. ಇಡೀ ಪ್ರದೇಶ ವಿಶಾಲ ಸಮುದ್ರವಾಗಿತ್ತು. ಬಹು ದೀರ್ಘಕಾಲಾವಧಿಯಲ್ಲಿ ಹಿಮಾಲಯ ಪರ್ವರಶ್ರೇಣಿಗಳು ಮೇಲೆದ್ದುವು. ಈಗಲೂ ಇವು ಬೆಳೆಯುತ್ತವೆ. ಮುದ್ದೆಗಟ್ಟಿದ ಶಿಲೆಯ ಸಮತಲ ಸ್ತರಗಳು ಕಾಲಗತಿಯಲ್ಲಿ ಒತ್ತಡಕ್ಕೆ ಒಳಗಾದ ಉರುಟುಕಲ್ಲುಗಳಿಂದಲೂ ಸಾಗರಿಕ ಫಾಸಿಲುಗಳಿಂದ ಕೂಡಿದ ಸುಣ್ಣಕಲ್ಲುಗಳಿಂದಲೂ ರಚಿತವಾಗಿವೆ. ಜಾನ್‍ಡಾಂಗ್ ಪ್ರದೇಶದ ಸರೋವರಗಳು ಪ್ರಾಚೀನ ಸರೋವರದ ಶೇಷಗಳು. ಕೂನ್‍ಲೂನ್ ಪರ್ವತ ಸಂಕೀರ್ಣ ಹಿಮಾಲಯನ್ ಪರ್ವತ ವ್ಯವಸ್ಥೆಗಿಂತ ಪ್ರಾಚೀನವಾದ್ದು. ಇದು ಪೇಲಿಯೊ ಜೋಯಿಕ್ ಯುಗದ್ದು. ಹಿಮಾಲಯದ ರೂಪಾಂತರಿತ ಸುಣ್ಣಕಲ್ಲುಗಳೂ ಬೆಣಚುಕಲ್ಲುಗಳೂ ಜುರಾಸಿಕ್ ಯುಗದವು. ಹಿಮನದೀ ಅವಧಿಗಳಲ್ಲಿ ಇಡೀ ಉನ್ನತಪ್ರದೇಶವನ್ನು ನೀರ್ಗಲ್ಲ ಫಲಕಗಳು ಕವಿದಿದ್ದಿರಬಹುದು. ಪ್ಲೀಸ್ಟೋಸೀನ್ ಸಂಚಯನಗಳು ಹಲವು ಎಡೆಗಳಲ್ಲಿ ಅತೀವ ಮಂದವಾಗಿವೆ.

ಭೌತಲಕ್ಷಣ: ಟಿಬೆಟ್ ಒಂದು ಉನ್ನತ ಪ್ರಸ್ಥಭೂಮಿಯ ಮೇಲೆ ಇದೆ. ಅದರ ಸುತ್ತಲೂ ಉನ್ನತ ಪರ್ವತರಾಶಿಗಳು. ಟಿಬೆಟ್ಟಿನಲ್ಲಿ ಪರ್ವತಗಳು ವಾಯವ್ಯದಿಂದ ಆಗ್ನೇಯಕ್ಕೆ ಹಬ್ಬಿವೆ. ಅವುಗಳನಡುವೆ ಆಳವಾದ ಇಲ್ಲವೇ ತೆಟ್ಟೆಯಾದ ಅನೇಕ ಕಣಿವೆಗಳಿವೆ. ಉನ್ನತ ಹಿಮಾಲಯ ಶ್ರೇಣಿಗಳು ಟಿಬೆಟ್ಟಿನ ದಕ್ಷಿಣದಲ್ಲಿ ಉದ್ದಕ್ಕೂ ಹಬ್ಬಿ , ಹಿಂದೂ ಸಾಗರದ ಉಷ್ಣ ಮಾನ್ಸೂನ್ ಮಾರುತವನ್ನು ತಡೆಯುತ್ತವೆ. ಹಿಮಾಲಯ ವ್ಯವಸ್ಥೆಯ ಉದ್ದ ಸು. (1500) ಮೈ. ಅದರ ಉತ್ತರಕ್ಕೆ ಟಿಬೆಟ್ಟಿನಲ್ಲಿ ಹಬ್ಬಿರುವ ಶ್ರೇಣಿಗಳು ನಾಲ್ಕು : ಲಡಾಕ್, ಕೈಲಾಸ್, ಕಾರಕೋರಂ ಮತ್ತು ಕೂನ್ ಲೂನ್. ಲಡಾಕ್ ಶ್ರೇಣಿಯ ಅತ್ಯುನ್ನತ ಶಿಖರ ಗುರ್ಲಮಾಂಧಾತ ಅಥವಾ ಕ್ವಾಲಾಮಾಂಟಾಟ (25,355`). ಇದು ಮಾನಸಸರೋವರದಿಂದ (12) ಮೈ. ದೂರದಲ್ಲಿದೆ. ಮಾನಸಸರೋವರಕ್ಕೆ ಉತ್ತರದಲ್ಲಿರುವ ಕೈಲಾಸ ಶ್ರೇಣಿಯಲ್ಲಿ ಹಲವು ಶಿಖರಗಳ ಗೊಂಚಲೇ ಇದೆ. ಅವುಗಳಲ್ಲಿ ಹಲವು ಶಿಖರಗಳು (20,000`) ಗೂ ಎತ್ತರವಾಗಿವೆ. ಪೊ.ರೇ. 77ಲಿಯಿಂದ 93ಲಿ ವರೆಗೆ ಹಬ್ಬಿರುವ ಕೂನ್ ಲೂನ್ ಶ್ರೇಣಿ ಟಿಬೆಟ್ ಪ್ರಸ್ಥಭೂಮಿಯ ಉತ್ತರದ ಅಂಚಿನಲ್ಲಿದೆ. ಪೂರ್ವ ಟಿಬೆಟ್ಟಿನ ಪರ್ವತಗಳು ದಕ್ಷಿಣೋತ್ತರವಾಗಿ ಹಬ್ಬಿವೆ. ಇವು ಬಹುಕಾಲ ಚೀನೀ ಸಂಸ್ಕøತಿಯ ಸಂಪರ್ಕಕ್ಕೆ ಅಡ್ಡಿಯಾಗಿ ಪರಿಣಮಿಸಿದ್ದುವು. ಆದರೆ ದಕ್ಷಿಣದ ಆದ್ರ್ರ ಮಾರುತಗಳು ಇಲ್ಲಿಯ ನದೀಕಣಿವೆಗಳ ಮೂಲಕ ಉತ್ತರಾಭಿಮುಖವಾಗಿ ಬೀಸಲು ಅಡ್ಡಿಯುಂಟಾಗಿಲ್ಲ.

ಏಷ್ಯದ ಮಹಾನದಿಗಳಲ್ಲಿ ಹಲವು ಹುಟ್ಟುವುದು ಟಿಬೆಟ್ಟಿನ ಪರ್ವತಸೀಮೆಯಲ್ಲಿ. ಯಾಂಗ್ಟ್‍ಸೀ ನದಿ ಉಲಾನ್ ಲೂಲದಲ್ಲಿ ಉಗಮಿಸುತ್ತದೆ. ಮೇಕಾಂಗ್ ಮತ್ತು ಹಳದಿ ನದಿಗಳು ಡಾಂಗ್-ಲಾ ಶ್ರೇಣಿಯಲ್ಲಿ ಉಗಮಿಸುತ್ತವೆ. ಸಾಲ್ವೀನ್ ನದಿಯ ಹುಟ್ಟು ಲಾಸದ ಉತ್ತರಕ್ಕೆ ನ್ಗಾಚುಕದ ಬಳಿಯಲ್ಲಿ. ಇರವಾಡೀ ನದಿ ಕೈಲಾಸಪರ್ವತದ ಪೂರ್ವ ಅಂಚಿನಲ್ಲಿ ಹುಟ್ಟುತ್ತದೆ. ಸಿಂಧು, ಸಟ್ಲೆಜ್ ಮತ್ತು ಬ್ರಹ್ಮಪುತ್ರ ನದಿಗಳು ಕೈಲಾಸಪರ್ವತದ ದಕ್ಷಿಣದಲ್ಲಿ ಮಾನಸಸರೋವರದ ಬಳಿ ಹುಟ್ಟುತ್ತವೆ. ಟಿಬೆಟ್ಟಿನ ಅತ್ಯಂತ ಉದ್ದದ ನದಿ ಬ್ರಹ್ಮಪುತ್ರ (ಟ್ಸಾಂಗ್ ಪೋ) ಭಾರತವನ್ನು ಪ್ರವೇಶಿಸುವುದಕ್ಕೆ ಮೊದಲು ಅಲ್ಲಿ (800) ಮೈ. ಹರಿಯುತ್ತದೆ. ಅದರ ಅನೇಕ ಉಪನದಿಗಳ ಪೈಕಿ ಮುಖ್ಯವಾದವು ಕ್ಯೀ-ಚೂ ಅಥವಾ ಲಾ ಸಾ, ಷಾಮ್‍ಡ, ನ್ಯಾಂಗ್ ಚೂ, ಯಿಗ್ರಾಂಗ್ ಮತ್ತು ನಾಗಾಂಗ್.

ಕೈಲಾಸ ಮತ್ತು ಕೂನ್ ಲೂನ್ ಶ್ರೇಣಿಗಳ ನಡುವೆ ಇರುವ ಚಾಂಗ್ ಕಾಂಗ್ ಪ್ರದೇಶದಲ್ಲಿ ಅಸಂಖ್ಯಾತ ಸರೋವರಗಳಿವೆ. ಆದರೆ ಟಿಬೆಟ್ಟಿನ ಅತ್ಯಂತ ದೊಡ್ಡ ಸರೋವೆಗಳ ಪೈಕಿ ಮೂರು-ಚಿಂಗ್‍ಹೈ (ಕೋ-ಕೋ ನೋರ್), ಮಾನಸಸರೋವರ ಮತ್ತು ಯಾಮ್‍ಡ್ರಾಕ್ ಟ್ಸಾ (ಯಾಂಗ್ - ಜೋ - ಯುಂಗ್)- ಈ ಪ್ರದೇಶದ ಹೊರಗಡೆ ಇವೆ.

ಭೌಗೋಳಿಕ ಪ್ರದೇಶಗಳು : ಟಿಬೆಟ್ಟನ್ನು ಸ್ಥೂಲವಾಗಿ ಐದು ಭೌಗೋಳಿಕ ಪ್ರದೇಶಗಳಾಗಿ ವಿಂಗಡಿಸಲಾಗಿದೆ : (1) ವೇ ಪ್ರದೇಶ ಟಿಬೆಟ್ಟಿನ ಮಧ್ಯ ಭಾಗ, ಆಧುನಿಕ ಟಿಬೆಟ್ಟಿನ ಸಾಂಸ್ಕøತಿಕ ಹಾಗೂ ರಾಜಕೀಯ ಕೇಂದ್ರ. ಬ್ರಹ್ಮಪುತ್ರದ ಉಪನದಿಗಳಾದ ಕ್ಯೀ ಚ್ಯೂ (ಲಾ ಸಾ) ಮತ್ತು ಯಾರ್ಲಂಗ್‍ಗಳ ಬಯಲುಗಳು ಈ ಪ್ರದೇಶಕ್ಕೆ ಸೇರಿವೆ. ಲಾಸ, ಟಿಬೆಟ್ಟಿನ ರಾಜಧಾನಿ ಯಾರ್ಲಂಗ್- ಇವು ವೇ ಪ್ರದೇಶದಲ್ಲಿವೆ. (2) ವೇ ಪ್ರದೇಶಕ್ಕೆ ಪಶ್ಚಿಮದಲ್ಲಿರುವುದು ಟ್ಸಾಂಗ್ ಜಿಲ್ಲೆ. ಅದರ ಮುಖ್ಯ ಪಟ್ಟಣ ಷಿಗಾಟ್ಸೆ. ಇದಕ್ಕೆ ಉತ್ತರದಲ್ಲಿ ಟಿಬೆಟ್ ಜನರ ಧಾರ್ಮಿಕ ಹಾಗೂ ರಾಜಕೀಯ ಕೇಂದ್ರವಾದ ಟ್ರಿಷಿ ಲ್ಹುಂಪೊ ಇದೆ. (3) ಇನ್ನೂ ಪಶ್ಚಿಮಕ್ಕೆ ಇರುವುದು ಎನ್ಗಾರಿ ಪರ್ವತಸೀಮೆ. ಹಿಮಾಚ್ಛಾದಿತ ಶೃಂಗಗಳಿಂದಲೂ ಆಳವಾದ ನದೀಕಮರಿಗಳಿಂದಲೂ ಕೂಡಿದ ಈ ಪ್ರದೇಶದಲ್ಲಿ ಹೆಚ್ಚು ಜನಸಾಂದ್ರತೆಯಿಲ್ಲ. ಇಲ್ಲಿಯ ಅಲೆಮಾರಿ ಜನರು ಮೇವನ್ನು ಅರಸುತ್ತ ತಮ್ಮ ಸಾಕುಪ್ರಾಣಿಗಳನ್ನು ಹೊಡೆದುಕೊಂಡು ಕಣಿವೆಯಿಂದ ಕಣಿವೆಗೆ ಸಂಚರಿಸುತ್ತಿರುತ್ತಾರೆ. (4) ಜಾಂಗ್ ಡಾಂಗ್ ಪ್ರದೇಶ ಉತ್ತರದ ವಿಶಾಲ ಬಯಲು. ಇದು ಹಿಮಗಟ್ಟಿದ ಬಂಜರು. ಇಲ್ಲಿ ಬಹು ವಿರಳವಾಗಿ ಜನ ವಾಸಿಸುತ್ತಾರೆ. (5) ಟಿಬೆಟ್ಟಿನ ಅತ್ಯಂತ ಫಲವತ್ತಾದ ನೆಲವೆಂದರೆ ಪೂರ್ವಭಾಗದ ಖಾಮ್ ಪ್ರದೇಶ. ಇಲ್ಲಿ ಜನಸಾಂದ್ರತೆ ಅತ್ಯಧಿಕ. ಇದು ಇತರ ಪ್ರದೇಶಗಳಿಗಿಂತ ತಗ್ಗಿನಲ್ಲಿದೆ. ಇಲ್ಲಿ ಮಳೆಯೂ ಹೆಚ್ಚು. ಇಲ್ಲಿಯ ನದಿಗಳ ಕಮರಿಗಳ ಅಂಚಿನಲ್ಲಿ ದಟ್ಟಡವಿಗಳಿವೆ. ನದಿಗಳ ಕೆಳದಂಡೆ ಪ್ರದೇಶಗಳು ಸಾಗುವಳಿಗೆ ಇಳಪಟ್ಟಿವೆ.
(ವಿ.ಜಿ.ಕೆ.;ಆರ್.ಪಿ.ಎಸ್.)

ವಾಯುಗುಣ: ಸಮುದ್ರದಿಂದ ಇರುವ ದೂರದಿಂದಾಗಿ ಟಿಬೆಟ್ಟಿನಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹೋದಂತೆ ಅವಪಾತ ಕಡಿಮೆ. ಹಿಮಾಲಯ ಪರ್ವತಗಳು ಮಾನ್ಸೂನ್ ಮೋಡಗಳನ್ನು ತಡೆದು ಅಲ್ಲೇ ಬಹುತೇಕ ಮಳೆ ಸುರಿಸುತ್ತವೆ. ಹಿಮಾಲಯದ ದಕ್ಷಿಣ ಪಾಶ್ರ್ವಗಳಲ್ಲಿ ವಾರ್ಷಿಕ ಮಳೆ (200".) ಅಳಿದುಳಿದು ಕಣಿವೆಗಳಲ್ಲಿ ಮುಂದೆ ಸಾಗಿದ ಮೋಡಗಳು ಕೈಲಾಸ ಪರ್ವತಗಳ ಮೇಲೆ ಮಳೆ ಸುರಿಸುತ್ತವೆ. ಅಲ್ಲಿಂದಾಚೆಗೆ ಶುಷ್ಕ ವಾಯುಗುಣ. ಟಿಬೆಟ್ಟಿನ ಬಹುಭಾಗದ ಮೇಲೆ ವಾರ್ಷಿಕವಾಗಿ (8") ಗಿಂತ ಕಡಿಮೆ ಮಳೆ ಅಥವಾ ಹಿಮ. ಔನತ್ಯದಿಂದಾಗಿ ಉಷ್ಣತೆ ಕಡಿಮೆ. ವಾಯುಗುಣ ತುಂಬ ತೀವ್ರ. ವರ್ಷದ ಬಹುಕಾಲ ಅತ್ಯಂತ ಬಲವಾಗಿ ಬೀಸುವ ಗಾಳಿಯಿಂದ ಶೈತ್ಯ ಕೊರೆಯುತ್ತದೆ. ಇಪ್ಪತ್ನಾಲ್ಕು ಗಂಟೆಗಳಲ್ಲಿ ಉಷ್ಣತೆ ಬಹಳ ತೀವ್ರವಾಗಿ ವ್ಯತ್ಯಾಸವಾಗುತ್ತದೆ. ವರ್ಷವೆಲ್ಲ ವಾಯುಗುಣ ಬದಲಾಗುತ್ತಲೇ ಇರುತ್ತದೆ. ಬೆಳಗ್ಗೆ ಮತ್ತು ಸಂಜೆ ಕೊರೆಯುವ ಚಳಿ. ಉಷ್ಣತೆ ಸಾಮಾನ್ಯವಾಗಿ -18ಲಿಅ. ಗೆ (0ಲಿ ಈ). ಇಳಿಯುತ್ತದೆ. ಮಧ್ಯಾಹ್ನ ಅದು 38ಲಿ ಅ.ಗೆ (100ಲಿ ಈ). ಏರಬಹುದು. ಆಗ ಬಿಸಿಲು ಬಲು ಚುರುಕು. ಟಿಬೆಟ್ ಪ್ರಸ್ಥಭೂಮಿಯಲ್ಲಿ ವರ್ಷಕ್ಕೆ 3-4 ತಿಂಗಳುಗಳು ಮಾತ್ರ ಹಿಮಗಟ್ಟುವುದಿಲ್ಲ. ಬೇಸಿಗೆಯಲ್ಲೂ ಹಿಮ ಬೀಳುವುದುಂಟು. 12,000`ಗಿಂತ ಕಡಿಮೆ ಮಟ್ಟದಲ್ಲಿ, ನದೀಕಣಿವೆಗಳಲ್ಲಿ ಮತ್ತು ದಕ್ಷಿಣ ಟಿಬೆಟ್ಟಿನಲ್ಲಿ ವಾಯುಗುಣ ಹಿತಕರವಾಗಿರುತ್ತದೆ. ಗಾಳಿ ಶುಷ್ಕ. ದೂಳಿನ ಬಿರುಗಾಳಿ ಇಲ್ಲದ್ದರಿಂದ ಆಕಾಶ ಶುಭ್ರವಾಗಿರುತ್ತದೆ.
ಸಸ್ಯಪ್ರಾಣಿಜೀವನ: ಟಿಬೆಟ್ಟಿನ ಮೂರನೆಯ ಎರಡು ಭಾಗವನ್ನು ಆಕ್ರಮಿಸಿಕೊಂಡಿರುವ ಉತ್ತರದ ಮೈದಾನದಲ್ಲಿ ಮರಗಳಿಲ್ಲ. ಅಲ್ಲಿ ಮಳೆ ಇಲ್ಲ. ಒಣ ಗಾಳಿ ಬೀಸುತ್ತದೆ. ಬಹಳ ಚಳಿ. ಇದು ಸರಾಸರಿಯಲ್ಲಿ ಸಮುದ್ರಮಟ್ಟದಿಂದ 15,000'ಗಿಂತ ಎತ್ತರದಲ್ಲಿದೆ. ಎನ್‍ಗಾರಿ ಜಿಲ್ಲೆಯ ಸಟ್ಲೆಜ್ ನದೀ ಬಯಲು, ದಕ್ಷಿಣದ ಚುಂಬಿ ಕಣಿವೆ-ಈ ಪ್ರದೇಶಗಳಲ್ಲಿ ದಟ್ಟ ಅರಣ್ಯಗಳಿವೆ. ಶಂಕುಧಾರಿ ದೈತ್ಯಸ್ವರೂಪಿ ಮರಗಳು, ಓಕ್, ಅಕ್ರೋಟು, ಮೇಪಲ್, ಪಾಪ್ಲರ್, ಸ್ಟ್ರೂಸ್, ತಾಳೇಪ್ರದೇಶ ಮುಂತಾದ ಮರಗಳಿವೆ. ಕಾಡುಗಳಲ್ಲಿ ಪೈಮು (ಹೃದಯವಿಷ), ಹರಿಕುಶ, ರೇವಲ್‍ಚಿನ್ನಿ, ಕೇಸರಿ, ಬಜೆ ಮುಂತಾದ ಮೂಲಿಕೆಗಳುಂಟು.
ಟಿಬೆಟ್ಟಿನ ಸಾಕುಪ್ರಾಣಿಗಳು ಕುರಿ, ಮೇಕೆ, ಯಾಕ್, ಕುದುರೆ, ಕತ್ತೆ. ಯಾಕ್ ಹೇರುಪ್ರಾಣಿ. ಅದು ಕಡಿದಾದ ಪರ್ವತಭಾಗಗಳಲ್ಲಿ ಪ್ರಯಾಣಮಾಡಬಲ್ಲದು. ಆದರೆ ಅದು ವ್ಯವಸಾಯಕ್ಕೆ ಯೋಗ್ಯವಲ್ಲ. ಹಿಂದೆ ಪ್ರಸಿದ್ದವಾಗಿದ್ದ ಬಲಯುತವಾದ ಜಾತಿಯ ಕುದುರೆಗಳು ಈಗ ಟಿಬೆಟ್ಟಿನಲ್ಲಿಲ್ಲ. ಸವಾರಿಕುದುರೆಗಳನ್ನು ಚೀನದ ಚಿಂಗ್‍ಹೈ ಪ್ರಾಂತ್ಯದಿಂದ ತರಿಸಿಕೊಳ್ಳುತ್ತಾರೆ. ಟಿಬೆಟ್ಟಿನ ವನ್ಯಮೃಗಗಳು ಕಾಡುಯಾಕ್, ಕಾಡುಕುದುರೆ, ಕಾಡುಕತ್ತೆ, ಹಿಮಚಿರತೆ, ಲಿಂಕ್ಸ್, ಕಂದು ಅಥವಾ ಕರಿಕರಡಿ, ಗೆಜೆóಲ್, ಸಾರಂಗ, ಮಾರ್ಮಾಟ್, ಜಿಂಕೆ, ಕಸ್ತೂರಿಮೃಗ, ಬಾತುಕೋಳಿ, ಉಳಿಸಿಂಡ, ಮರಕುಟಿಗ, ಪಾರಿವಾಳ, ಗುಬ್ಬಚ್ಚಿ ಮುಂತಾದವು. ಟಿಬೆಟ್ಟಿನ ಪೂರ್ವಭಾಗದಲ್ಲಿ ಸುಂದರವಾದ ಜೀವಂಜೀವಗಳಿವೆ,

ಜನಜೀವನ: ಟಿಬೆಟನರು ಪಶ್ಚಿಮ ಚೀನ ಪರ್ವತಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳಿಗೆ ಬಹಳ ಹತ್ತಿರದ ಸಂಬಂಧ ಹೊಂದಿದವರು. ಟಿಬೆಟನ್ ಭಾಷೆಗೂ ಉತ್ತರ ಬರ್ಮದ ಕೂಕಿ ಮತ್ತು ಷಾನ್ ಜನ ಆಡುವ ಭಾಷೆಗಳಿಗೂ ಹೋಲಿಕೆಗಳಿವೆ. ಟಿಬೆಟನರ ಪ್ರಧಾನ ಲಕ್ಷಣಗಳು ಕಪ್ಪು ಕೂದಲು, ಕಂದು ಬಣ್ಣ ಮತ್ತು ಕಂದುಕಣ್ಣು. ಲಡಖ್ ಭಾಗದಿಂದ ಹಿಡಿದು ಚೀನದ ವಾಯುವ್ಯ ಪ್ರಾಂತದವರೆಗೆ ಈ ಜನ ಅಲ್ಲಲ್ಲಿ ಹರಡಿದ್ದಾರೆ. ಇವರಲ್ಲಿ ಮೂರು ಪ್ರಮುಖ ಬಣಗಳಿವೆ : ಟಿಬೆಟ್ಟಿನ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿರುವ ಬೋದ್‍ಪೋ. ಪೂರ್ವ ಟಿಬೆಟ್ಟಿನ ಖಂಪ, ವಾಯವ್ಯ ಚೀನದ ಅಮ್‍ದೊ. ಎಲ್ಲರು ಬೌದ್ದ ಧರ್ಮೀಯರು. ಅವರ ಭಾಷೆ ಒಂದೇ, ಪೂರ್ವ ಟಿಬೆಟ್ಟಿನವರು ಸ್ವಲ್ಪ ಎತ್ತರವಾಗಿರಬಹುದು.

ಬಾಹ್ಯ ಪ್ರಪಂಚದಿಂದ ದೂರವಾದ, ಪರ್ವತಗಳ ನಡುವಣ, ಟಿಬೆಟ್‍ನಲ್ಲಿ ವಿಶಿಷ್ಟ ಪದ್ದತಿಗಳಿವೆ. ಜನ ಉದ್ದ ತೋಳಿನ ನಿಲುವಂಗಿ, ಕುರಿ ಚರ್ಮದ ಅಂಗಿ, ತಲೆಗೆ ವಿವಿಧ ಆಕಾರಗಳ ಹ್ಯಾಟ್ ಧರಿಸುತ್ತಾರೆ. ಪುರುಷರು ಸರ ಮತ್ತು ಕರ್ಣಾಭರಣಗಳನ್ನು ತೊಡುವುದುಂಟು. ಸ್ತ್ರೀಯರು ವಿವಿಧ ಆಭರಣಗಳನ್ನು ಧರಿಸುತ್ತಾರೆ. ಅವರಿಗೆ ಶಿರಾಭರಣಗಳೂ ಇವೆ. ಕೂದಲನ್ನು ಹಲವಾರು ಕಿರುಜಡೆಗಳಾಗಿ ಹೆಣೆದು ಒಟ್ಟಿಗೆ ಸೇರಿಸಿ ಶೃಂಗರಿಸಿಕೊಳ್ಳುವ ಶೈಲಿ ಅವರದು. ಲಾಮ ಪುರೋಹಿತರು ಮಂತ್ರಿಸಿಕೊಡುವ ತಾಯಿತಗಳನ್ನು ಕೊರಳಲ್ಲಿ ಧರಿಸುತ್ತಾರೆ. ವಿವಾಹಿತ ಸ್ತ್ರೀಯರಿಗೆ ಹೆಚ್ಚು ಗೌರವವಿದೆ. ಆದರೆ ಧರ್ಮಾಚರಣೆಗಳಲ್ಲಿ ಅವರಿಗೆ ಸ್ಥಾನವಿಲ್ಲ. ಜೆಲುಗ್ಪ ಸಂನ್ಯಾಸಿಗಳ ಹೊರತು ಇತರ ಲಾಮಗಳು ವಿವಾಹಮಾಡಿಕೊಳ್ಳಬಹುದು. ಬಹುಪತಿ ವಿವಾಹ ರೂಢಿಯಲ್ಲಿದೆ. ಸಹೋದರರು ಒಬ್ಬಳನ್ನೇ ವಿವಾಹಮಾಡಿಕೊಳ್ಳುತ್ತಾರೆ.

ಶ್ರೀಮಂತರ ಭವನಗಳು ಕಲಾಕೃತಿಗೆ ಪ್ರಸಿದ್ದವಾಗಿವೆ. ಸಾಮಾನ್ಯರ ಮನೆಗಳ ಚಾವಣಿ ಮಣ್ಣಿನದು. ಗೋವಳರು ಯಾಕ್ ಪ್ರಾಣಿಯ ಕೂದಲಿಂದ ತಯಾರಿಸಿದ ಉಣ್ಣೆಯ ಡೇರೆಗಳಲ್ಲಿ ವಾಸಿಸುತ್ತಿದ್ದರು.

ಜನರ ಆಹಾರ ಯಾಕ್ ಪ್ರಾಣಿಯ ಮಾಂಸ, ಬಾರ್ಲಿ, ಬೆಣ್ಣೆ, ಚಹ, ಇವರು ಮೀನು ಮತ್ತು ಕೋಳಿಗಳನ್ನು ತಿನ್ನುವುದಿಲ್ಲ. ಮೊಟ್ಟೆಗೆ ಅಭ್ಯಂತರವಿಲ್ಲ. ತಗ್ಗು ಪ್ರದೇಶದ ಜನರ ಆಹಾರ ಅಕ್ಕಿ, ಹಣ್ಣು, ತರಕಾರಿ, ಗೋದಿ, ಬಾರ್ಲಿಯಿಂದ ಮದ್ಯ ತಯಾರಿಸುತ್ತಾರೆ.

ಆರ್ಥಿಕತೆ: ಟಿಬೆಟ್ಟಿನ ಬಹುಭಾಗ ಬಂಜರು ಮತ್ತು ಮಂಜುಗಟ್ಟಿದ ನೆಲ. ನದಿಗಳ ಜಲಾನಯನ ಪ್ರದೇಶಗಳಲ್ಲಿ ಹಾಗೂ ಆಗ್ನೇಯದ ಫಲವತ್ತಾದ ತಗ್ಗು ನೆಲದಲ್ಲಿ ವ್ಯವಸಾಯ ನಡೆಯುತ್ತದೆ. ಮುಖ್ಯ ಬೆಳೆಗಳು ಬಾರ್ಲಿ, ಟರ್ನಿಪ್, ಗೋದಿ, ಇತರ ಧಾನ್ಯಗಳು. ಆಗ್ನೇಯದಲ್ಲಿ ಬತ್ತವನ್ನು ಬೆಳೆಯುತ್ತಾರೆ. ಬ್ರಹ್ಮಪುತ್ರ ಕಣಿವೆ ಟಿಬೆಟ್ಟಿನ ಕಣಜ. ಅಲ್ಲಿಯ ವ್ಯವಸಾಯೋತ್ಪನ್ನ ಶೇಕಡ (60)ರಷ್ಟು ಜನರಿಗೆ ಆಧಾರವಾಗಿದೆ. (1950)ರಲ್ಲಿ ಚೀನೀ ವಿಜ್ಞಾನಸಂಸ್ಥೆ ಪರಿಶೋಧನೆ ನಡೆಸಿ ಭೂಮಿ ಮತ್ತು ವಾಯುಗುಣಗಳಿಗೆ ಅನುಗುಣವಾದ ಬೆಲೆಗಳ ಬಗ್ಗೆ ಸಲಹೆ ನೀಡಿತು.

(1950)ರ ಅನಂತರ ಟಿಬೆಟ್ಟಿನಲ್ಲಿ ಖನಿಜ ನಿಕ್ಷೇಪಗಳ ಪರಿಶೋಧನೆ ನಡೆದಿದೆ. ಇಲ್ಲಿ ತೈಲ, ಕಲ್ಲರಗು, ಕಬ್ಬಿಣ, ಮ್ಯಾಂಗನೀಸ್, ಉಪ್ಪು, ಸೋಡ, ಟಿಂಕಣ, ಗಂಧಕ, ಸ್ಪಟಿಕ, ಅಭ್ರಕ, ಗ್ರಾಫೈಟ್, ಜಿಪ್ಸಂ, ಜೇಡ್ ಶಿಲೆ, ಪಿಂಗಾಣಿ ಮಣ್ಣು ಮುಂತಾದ ಖನಿಜಗಳ ನಿಕ್ಷೇಪಗಳಿವೆ. ಮೇಕಾಂಗ್ ನದಿಯ ಅಂಚಿನಲ್ಲಿ (25) ಮೈ. ದೂರದಷ್ಟು ಪ್ರದೇಶದಲ್ಲಿ ಕಬ್ಬಿಣದ ಅದಿರು ಸಿಕ್ಕಿದೆ. ಎನ್ಗಚೂಕ ಪ್ರದೇಶದಲ್ಲಿ ಕಲ್ಲಿದ್ದಲು ಹಾಗೂ ಕಬ್ಬಿಣ ಅದಿರು ತೆಗೆಯಲಾಗುತ್ತಿದೆ.

ಟಿಬೆಟ್ ಗೃಹಕೈಗಾರಿಕೆ ಹಾಗೂ ಕುಶಲಕಲೆಗಳಿಗೆ ಪ್ರಸಿದ್ದವಾಗಿದೆ. ಈಚೆಗೆ ಜವಳಿ, ಕಬ್ಬಿಣ, ಉಕ್ಕು, ವಿದ್ಯುತ್ತು ಮುಂತಾದ ದೊಡ್ಡ ಉದ್ಯಮಗಳು ಟಿಬೆಟ್ಟಿನಲ್ಲಿ ಸ್ಥಾಪಿತವಾಗಿದೆ.

ಟಿಬೆಟ್ಟಿನ ಮುಖ್ಯ ನಿರ್ಯಾತ ವಸ್ತುಗಳು ಉಣ್ಣೆ, ಬೋರಾಕ್ಸ್, ಉಪ್ಪು, ಮೂಲಿಕೆಗಳು, ಪ್ರಾಣಿಮೂಲವಸ್ತುಗಳು. ಚಹ, ರೇಷ್ಮೆ, ಯಂತ್ರಸರಕು ಅಮದಾಗುತ್ತವೆ. 

ಹಿಂದೆ ಟಿಬೆಟ್ಟಿನಲ್ಲಿ ಸಾರಿಗೆಸೌಲಭ್ಯಗಳಿರಲಿಲ್ಲ. ಜನರು ಕಾಲುನಡಿಗೆಯಿಂದ ಅಥವಾ ಪ್ರಾಣಿಗಳ ಮೇಲೆ ದಾರಿ ಕ್ರಮಿಸಬೇಕಾಗಿತ್ತು. ಕಮ್ಯೂನಿಸ್ಟ್ ಆಡಳಿತದಲ್ಲಿ ಹಲವು ಮೋಟಾರು ರಸ್ತೆಗಳನ್ನು ನಿರ್ಮಿಸಲಾಗಿದೆ. ಚಿಂಗ್‍ಹೈ ಮತ್ತು ಷೀಕಾಂಗ್ ಹೆದ್ದಾರಿಗಳು ಮುಖ್ಯವಾದವು. (1956)ರಲ್ಲಿ ವಿಮಾನ ಸಂಚಾರ ಪ್ರಾರಂಭವಾಯಿತು. ಲಾಸ ಮತ್ತು ಜೆಂಜೋ ನಡುವೆ ವಿಮಾನಗಳು ಹಾರುತ್ತವೆ. ಚಾಮ್‍ಡೊ, ಷಿಗಾಟ್ಸೆ ಮತ್ತು ಗಾರ್ಟೋಕ್‍ಗಳಲ್ಲಿ ಸೈನಿಕ ವಿಮಾನ ನಿಲ್ದಾಣಗಳಿವೆ.

ಟಿಬೆಟ್‍ನಲ್ಲಿ ರೈಲುಮಾರ್ಗಗಳಿಲ್ಲ. ಷೀನಿಂಗ್-ನಾಗ್ ಚೂಡ್ಷಾಂಗ್ ನಡುವೆ (807) ಮೈ. ಉದ್ದದ ರೈಲುಮಾರ್ಗ ಹಾಕಲು ಸರ್ವೆಕ್ಷಣ ನಡೆದಿದೆ. ಈ ರೈಲು ಮಾರ್ಗ ಸಮುದ್ರಮಟ್ಟಕ್ಕೆ ಸರಾಸರಿ (12,000') ಎತ್ತರದಲ್ಲಿ ಸಾಗುತ್ತದೆ.
(ವಿ.ಜಿ.ಕೆ.)

ಇತಿಹಾಸ: ವಾಮನಾವತಾರವನ್ನು ತಾಳಿದ್ದ ಅವಲೋಕಿತೇಶ್ವರನ ಸಂತತಿಗೆ ತಾವು ಸೇರಿದವರೆಂಬಯದು ಟಿಬೆಟ್ಟಿನ ಜನರ ಹಳೆಯ ನಂಬಿಕೆ. ಪುರಾಕೃತ ಫಲದಿಂದ ದೈತ್ಯಳಾಗಿದ್ದ ಒಬ್ಬಾಕೆ, ತನ್ನನ್ನು ಮದುವೆಯಾಗಬೇಕೆಂದು ಅವಲೋಕಿ ತೇಶ್ವರನನ್ನು ಪ್ರಾರ್ಥಿಸಿದಳು. ದಯಾಮಯನಾದ ಆತ ತನ್ನ ಗುರುವಿನ ಸಲಹೆ ಪಡೆದು ಆಕೆಯನ್ನು ಮದುವೆಯಾದ. ಅವರಿಗೆ ಆರು ಮಕ್ಕಳು ಜನಿಸಿದರು. ತಂದೆ ಪವಿತ್ರವಾದ ಆಹಾರವನ್ನು ಮಕ್ಕಳಿಗೆ ಉಣಬಡಿಸಿದ. ಅದರಿಂದ ಕ್ರಮೇಣ ಆ ಮಕ್ಕಳು ವಾನರರೂಪವನ್ನು ಕಳೆದುಕೊಂಡುವು-ಎಂಬುದು ಸಾಂಪ್ರಕಾಯಿಕ ಕತೆ. ಟಿಬೆಟ್ಟಿನವರು ಮೂಲತಃ ಮಂಗೋಲಿಯನ್ ಜನಾಂಗದವರು. ಇವರು ಅಸ್ಸಾಂ, ಬರ್ಮ ದೇಶಗಳಿಂದ ಟಿಬಟ್ಟಿಗೆ ಬಂದು ನೆಲಸಿದವರು. ಇವರ ಭಾಷೆ ಬರ್ಮೀ ಭಾಷೆಯೊಂದಿಗೆ ನಿಕಟಬಾಂಧವ್ಯ ಹೊಂದಿದೆ.

ಈ ದೇಶದ ಪ್ರಾಚೀನ ಇತಿಹಾಸ ಹೆಚ್ಚು ತಿಳಿಯದು. ಷಿಪ್ರಯೆ ಅಥವಾ ಪುಗ್ಯೆ ಈ ದೇಶದ ಮೊದಲ ಅರಸನೆಂದು ಅತ್ಯಂತ ಪ್ರಾಚೀನ ವರದಿಗಳಲ್ಲಿ ಹೇಳಿದೆ. ಈತನ ಕಾಲದಲ್ಲಿ ಬೊನ್ ಎಂಬ ಸರ್ವಚೇನವಾದಿ ಧರ್ಮ ಅಸ್ತಿತ್ವದಲ್ಲಿತ್ತು. ಕ್ರಿ.ಪೂ. 1ನೆಯ ಶತಮಾನದಿಂದ ಕ್ರಿ.ಶ. 7ನೆಯ  ಢತಮಾನದ ವರೆಗೂ ಅನೇಕ ಅರಸರು ಟಿಬಟ್ಟನ್ನು ಆಳಿದರು. ಅವರ ಕಾಲದಲ್ಲಿ ಕಲ್ಲಿದ್ದಲಿನ ಬಳಕೆ ಆರಂಭವಾಯಿತು. ನೀರಾವರಿ ಸೌಲಭ್ಯಗಳು ಎರ್ಪಟ್ಟುವು; ಅನೇಕ ಕೆರೆಗಳೂ ಕೊಳಗಳೂ ನಿರ್ಮಿತವಾದುವು; ಹೇಸರಗತ್ತೆಗಳನ್ನು ಸಾಕುವ ಪದ್ಧತಿ ಬೆಳೆಯಿತು; ಗಣೆ ಉದ್ಯಮಗಳು ಅಭಿವೃದ್ಧಿಹೊಂದಿದವು-ಎಂಬ ವಿವರಗಳು ಸಾಧಾರವಾದವಲ್ಲ. ಟಿಬಟ್ ಸಂಸ್ಕøತಿಯ ಅಸ್ತಿಭಾರ ಹಾಕಿದ ಸಾಂಗ್-ತ್ಸೆನ್ ಗ್ಯಾಂಪೊ 620ರಿಂದ 645ರವರೆಗೆ ಆಳಿ, ಬರ್ಮದ ಉತ್ತರಭಾಗ ಮತ್ತು ಚೀನದ ಪಶ್ಚಿಮ ಪ್ರದೇಶಗಳ ವರೆಗೆ ತನ್ನ ರಾಜ್ಯವನ್ನು ವಿಸ್ತರಿಸಿದ. ಚೀನದ ಸಮ್ರಾಟ ತನ್ನ ಕುಮಾರಿಯನ್ನು ಈತನಿಗೆ ಕೊಟ್ಟು ಮದುವೆ ಮಾಡಬೇಕಾಯಿತು. ನೇಪಾಳದ ರಾಜಕುಮಾರಿಯೊಬ್ಬಳು ಇವನ ಇನ್ನೊಬ್ಬ ಪತ್ನಿ. ಆ ವೇಳೆಗಾಗಲೇ ಬೌದ್ಧ ಧರ್ಮ ಟಿಬಟ್ಟನ್ನು ಪ್ರವೇಶಿಸಿತ್ತು. ಬೌದ್ಧ ಧರ್ಮಾವಲಂಬಿಗಳಾಗಿದ್ದ ತನ್ನ ಇಬ್ಬರು ಪತ್ಮಿಯರ ಪ್ರಭಾವಕ್ಕೆ ಈತ ಒಳಗಾಗಿ ಬೌದ್ಧಧರ್ಮವನ್ನು ಅಲ್ಲಿ ಪ್ರಸರಿಸಲು ಶ್ರಮಿಸಿದ. ಭಾರತದಿಂದ ಬೌದ್ಧಗ್ರಂಥಗಳನ್ನು ತರಲಾಯಿತು. ಅದುವರೆಗೂ ಆಡುಮಾತಾಗಿದ್ದ ಟಿಬಟ್ಟ್ ಭಾಷೆಗೆ ಲಿಪಿಯೊಂದು ಹುಟ್ಟಿದ್ದು ಕೂಡ ಆ ಗ್ರಂಥಗಳ ಅಧ್ಯಯನ ಅಧ್ಯಾಪನಳಿಗಾಗಿಯೇ. ಬೌದ್ಧಧರ್ಮ ರಾಜಧರ್ಮವೆನಿಸಿಕೊಂಡಿತು. ಗ್ಯಾಂಪೊ ತನ್ನ ರಾಜ್ಯಕ್ಕೆ ಭದ್ರವಾದ ಆಡಳಿತ ವ್ಯವಸ್ಥೆಯನ್ನು ನೀಡಿದ. ಭಾರತ ಮತ್ತು ಚೀನಗಳ ಹಲವಾರು ಕಲೆಗಳನ್ನೂ ಪದ್ಧತಿಗಳನ್ನೂ ತನ್ನ ರಾಜ್ಯದಲ್ಲಿ ಆರಂಭಿಸಿದ. ಲಾಸದಲ್ಲಿ ತನಗಾಗಿ ದೊಡ್ಡ ಅರಮನೆಯೊಂದನ್ನು ಕಟ್ಟಿಸಿದ. ಟಿಬೆಟ್ಟಿನ ಇತಿಹಾಸದಲ್ಲಿ ಈತನದು ಪ್ರಥಮ ಸ್ಥಾನ.
(ಎಚ್.ಜಿ.ಆರ್.;ಜಿ.ಬಿ.ಆರ್.)

755-797ರಲ್ಲಿ ಆಳಿದವನು ಖ್ರಿಸೋಂಗ್ ಡೆ-ತ್ಸೆನ್. ಈತ ಭಾರತದಿಂದ ಪದ್ಮಸಂಭವನೆಂಬ ಬೌದ್ಧ ಭಿಕ್ಷುವನ್ನು ಬರಮಾಡಿಕೊಂಡ. ಮುಂದಿನ ಶತಮಾನದಲ್ಲಿ ರಾಲ್-ಪಾ-ಚಾನ್ ಬೌದ್ಧ ಸಂಘಗಳನ್ನು ವ್ಯವಸ್ಥೆಗೊಳಿಸಿದ. ಭಿಕ್ಷುಗಳ ಪ್ರಭಾವ ಹೆಚ್ಚಿತು. ಅನೇಕ ಬೌದ್ಧಾಲಯಗಳು ಮಿರ್ವಿತವಾದುವು. ಭಾರತದಿಂದ ಅನೇಕ ಬೌದ್ಧಪಂಡಿತರು ಟಿಬೆಟ್ಟಿಗೆ ಬಂದು ಧಾರ್ಮಿಕ ಗ್ರಂಥಗಳನ್ನು ಭಾಷಾಂತರಿಸಿದರು; ಧರ್ಮಪ್ರಚಾರ ಮಾಡಿದರು.

ಗ್ಯಾಂಪೋನ ಕಾಲದಿಂದಲೂ ಟಿಬೆಟ್-ಚೀನಗಳ ನಡುವೆ ಕದನಗಳಾಗುತ್ತಲೇ ಇದ್ದುವು. ಗ್ಯಾಂಪೋನ ಮರಣಾನಂತರ ಚೀನೀಯರು ಲಾಸವನ್ನು ಆಕ್ರಮಿಸಿದರು. ಆದರೆ ಡೆ-ತ್ಸೆನನ ಕಾಲದಲ್ಲಿ ಚೀನೀಯರು ಪರಾಭವವನ್ನನುಭವಿಸಿ ಟಿಬೆಟ್ಟಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಬೇಕಾಯಿತು. ಅನಂತರ ಬಂದ ಪಾ ಚನ್ ತನ್ನ ರಾಜ್ಯವನ್ನು ಇನ್ನಷ್ಟು ವಿಸ್ತರಿಸಿದ. ಆದರೆ ಈತನ ಸೋದರ ಲಾಂಗ್-ದರ್-ಮ ಬೌದ್ಧಮತದ ವಿರೋಧಿಯಾಗಿದ್ದ. ಅಣ್ಣನ ಬೌದ್ಧಧರ್ಮದ ಒಲವನ್ನು ಸಹಿಸದೆ ಅವನನ್ನು ಕೊಂದು ಸಿಂಹಾಸನವನ್ನೇರಿದ. ಆದರೆ ಮೂರು ವರ್ಷಗಳೊಳಗಾಗಿಯೇ ಈತನೂ ಕೊಲ್ಲಲ್ಪಟ್ಟ (842). ಟಬೆಟ್ಟಿನ ಇತಿಹಾಸ ದಲ್ಲೆ ಅರಸುಮನೆಯನಗಳ ಆಳ್ವಿಕೆ ಇದರೊಂದಿಗೆ ಮುಗಿಯಿತು. ಅನೇಕ ಪೆಳೆಯಗರರು ತಲೆಯತ್ತಿ ಪ್ರಬಲರದರು.ಲಾಂಗ್-ದರ್-ಮನ ವಂಶಜರು ಪಶ್ಚಿಮ ಟಿಬೆಟ್ಟನಲ್ಲಿ (ಗುಗೆ, ಲಡಖ್) ಪ್ರಬಲರಾದರು. ಪಾಳೆಯಗಾರರ ಪರಸ್ಪರ ಕಲಹಗಳ ಪರಿಣಾವiವಾಗಿ ರಾಜಕೀಯ ಅವ್ಯವಸ್ಥೆ ತಲೆದೋರಿತು.

ಅನಂತರದ ಎರಡು ಶತಮಾನಗಳ ಇತಿಹಾಸ ಸ್ಪಷ್ಟವಾಗಿ ತಿಳಿಯದು. ಚೀನದಲ್ಲಿ ಆಳುತ್ತಿದ್ದ ಟಾಂಗ್ ಮನೆತನದ ಅರಸರು ಟಬೆಟ್ಟಿ£ ಅರಾಜಕತೆಯ ಪ್ರಯೋಜನ ಪಡೆದು, ಟಬೆಟ್ಟಿನ ವಶದಲ್ಲಿದ್ದ ಚೀನೀ ಪ್ರದೇಶಗಳನ್ನು ಗೆದ್ದುಕೊಂಡರು.
1207ರಲ್ಲಿ ಮಂಗೋಲರ ಜೆಂಗಿಸ್Àಖಾನ ಟಬೆಟಿ ಹಾಗೂ ಚೀನಗಲನ್ನು ಆಕ್ರಮಿಸಿದ. ಟಬೆಟ್ ಅವನ ಸಾರ್ವಭೌಮತ್ವವನ್ನು ಒಪ್ಪಿತು. ಚೀನದ ಕ್ಯಾನ್ಸೂ ಪ್ರಾಂತ್ಯದ ಅಧಿಪತಿಯಾಗಿದ್ದ ಗೋದನ್ 1239ರಲ್ಲಿ ಟಬೆಟ್ಟಿನ ಮೇಲೆ ದಾಳಿಮಾಡಿದ. ಆಗ ಟಿಬೆಟಿನ ಪ್ರಜೆಗಳು ಪ್ರಜಾನುರಾಗಿಯಾಗಿದ್ದ ಸಾಕ್ಯಪಂಡಿತನೆಂಬ ಸಾಕ್ಯ ಸಂಘದ ಲಾಮನನ್ನು ಆಶ್ರಯಿಸು ಆತನ ನೆರವನ್ನು ಅಪೇಕ್ಷಿಸಿದರು. ಮಂಗೋಲರ ನಾಯಕ ಆತನನ್ನು ತನ್ನ ಪ್ರತಿನಿಧಿಯಾಗಿ ನೇಮಿಸಿ ಟಿಬೆಟ್ಟಿನ ಆಡಳಿತ ಸೂತ್ರಗಳನ್ನು ಅವನಿಗೆ ವಹಿಸಿದ. 1251ರಲ್ಲಿ ಗೋದನ್ ಮರಣ ಹೊಂದಿದ ಬಳಿಕ ಟಿಬೆಟ್ಟು ಕ್ಯೂಬ್ಲೈಖಾನನ ವಶಕ್ಕೆ ಬಂತು. ಇದೇ ವೇಳೆಗೆ ಸಾಕ್ಯಪಂಡಿತನೂ ಮರಣ ಹೊಂದಿದ್ದ. ಈತನ ಸೋದರಳಿಯ ಫಗ್ಪನನ್ನು ಕ್ಯೋಬ್ಲೈಖಾನ್ ಗೌರವಿಸಿ ರಾಜಪ್ರಧಾನಿಯಾಗಿ ನೇಮಿಸಿ ಅವನಿಗೆ ತಿಸ್ರಿ ಎಂಬ ಬಿರುದು ನೀಡಿದ. ಭೌದ್ಧಧರ್ವವನ್ನು ರಾಜಧರ್ಮವೆಂದು ಸಾರಿದ. ಟಿಬೆಟ್ಟು ಮಂಗೋಲರ ಅಧೀನಕ್ಕೆ ಒಳಪಟ್ಟಿತು. ತಿಸ್ರಿಗಳು ಅರಸನ ಪ್ರತಿನಿಧಿಗಳಾಗಿ ಮಧ್ಯ ಟಿಬೆಟ್ಟಿನ ಅಧಿಪತಿಗಳಾದರು. ಆದರೆ ಹೀಗೆ ನೇಮಕಗೊಂಡ ತಿಸ್ರಿಗಳೆಲ್ಲ ಸಾಕ್ಯಪಂಡಿತನ ವಂಶಸ್ಥರೇ. ಅವರಲ್ಲಿಯ ದ್ವೇಷಾಸೂಯೆಗಳ ಪರಿಣಾವiವಾಗಿ ಕ್ರಮೇಣ ತಿಸ್ರಿಗಳ ಪ್ರಭಾವ ಕುಗ್ಗೊತು. ಕ್ಯೋಬ್ಲೈಖಾನ್ ಚೀನದ ಚಕ್ರವರ್ತಿಯಾದ. ಆದರೆ ಅಲ್ಲಿಯ ಜನರು ಈ ಪರಕೀಯನನ್ನು ಮತ್ತು ಈತನ ವಂಶವಾದ ಯೂವಾನ್ ಮನೆತನದ ಅರಸರನ್ನು ಹೊರದೂಡಲು ಯತ್ನಿಸಿ 1368ರಲ್ಲಿ ಯಶಸ್ವಿಯಾದರು. ಚೀನದಲ್ಲಿ ಮಿಂಗ್ ಅರಸರ ಆಳ್ವಿಕೆ ಆರಂಭವಾಯಿತು. ಯೂವಾನ್ ಅರಸರಂತೆ ಟಿಬೆಟ್ಟಿನ ಮೇಲಣ ಪ್ರಭುತ್ವವನ್ನು ಈ ಅರಸರು ಉಳಿಸಿಕೊಳ್ಳಲಾಗಲಿಲ್ಲ. ಸಾಕ್ಯಕುಲದ ಪ್ರತಿಸ್ಪರ್ಧಿಗಳಾಗಿದ್ದ ಪಗ್ಮೋತ್ರು ಕುಲದವರು ತಿಸ್ರೀಗಳನ್ನು ಕಡೆಗಣಿಸಿದರು. ಮಿಂಗ್ ಮನೆತನದ ಅರಸರು ನಾಮಮಾತ್ರಕ್ಕೆ ಟಿಬೆಟ್ಟಿನ ಪ್ರಭುಗಳಾಗಿದ್ದರೂ ವಾಸ್ತವವಾಗಿ ಪಗ್ಮೋತ್ರುಗಳೂ ಅನಂತರ ಬಂದ ರಿಂಪುಂಗ್ ಮತ್ತು ಟ್ಸಾಂಗ್ ಕುಲಗಳವರೂ ಟಿಬೆಟಿನ ಅರಸಾದರು. ಈ ಕುಲಗಳ ಲಾಮಗಳ ಚೀನಕ್ಕೆ ಹೋಗಿಬರುವಷ್ಟಕ್ಕೆ ಬೀನದೊಂದಿಗೆ ಇವರ ಸಂಬಂಧ ಸೀಮಿತವಾಗಿತ್ತು.
ಈ ವೇಳೆಗೆ ಭಾರತದಲ್ಲಿ ಬೌದ್ಧಧರ್ಮದ ತಾಂತ್ರಿಕ ಪದ್ಧತಿ ಪ್ರಭಾವಶಾಲಿಯಾಗಿತ್ತು. ಅದು ನೆರೆಯ ಪ್ರದೇಶಗಳಿಗೂ ಹಬ್ಬಿತು. ಪ್ರಕೃತಿಪೂಜಕರಾದ ಟಿಬೆಟ್ ಜನರು ತಾಂತ್ರಿಕ ಪದ್ಧತಿಗಳನ್ನು ತಮ್ಮ ಸಂಪ್ರದಾಯದೊಂದಿಗೆ ಹೊಂದಿಸಿಕೊಂಡು ವಿಶಿಷ್ಟವಾದ ಒಂದು ಧರ್ಮವನ್ನು ಬೇಳೆಸಿಕೊಂಡರು. ಈ ಧರ್ಮದ ಪ್ರಭಾವ ಆಳವಾಗಿ ಬೇರೂರಿ, ಧಾರ್ಮಿಕ ಗುರುಗಳೇ ಆಳರಸರೂ ಆದರು. 14ನೆಯ ಶತಮಾನದ ವರೆಗೂ ಕೆಂಪುಟೋಪಿಯ ಬೌದ್ಧ ಗುರುಗಳು ಸಮಾಜದಲ್ಲಿ ಪ್ರಮುಖ ಸ್ಥಾನ ಪಡೆದಿದ್ದರು. ಇವರು ಮದುವೆಯಾಗಬಹುದಿತ್ತು. ಮದ್ಯ ಸೇವಿಸಬಹುದಾಗಿತ್ತು. ಆದರೆ ಗೆಲುಗ್ಪ ಕುಲಕ್ಕೆ ಸೇರಿದ ತ್ಸಾಂಗ್-ಖಾ-ಪಾ (ಸು. 1357-1419) ಎಂಬ ಸುಧಾರಕನೊಬ್ಬ ಹಳದಿ ಟೋಪಿಯ ಹೊಸ ಪಂಥವನ್ನು ಆರಂಭಿಸಿದ. ಹೆಚ್ಚು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದ. ಈತನ ಉತ್ತರಾಧಿಕಾರಿ ಗ್ಯಾಂಡೆನ್ ತ್ರುಪ್ಪ 1474ರಲ್ಲಿ ಮರಣಹೊಂದಿದ. ಎರಡು ವರ್ಷಗಳ ಬಳಿಕ ಹುಟ್ಟಿದ ಬಾಲಕನೊಬ್ಬನನ್ನು ಆತನ ಆತ್ಮ ಪ್ರವೇಶಿಸಿತೆಂದು ಭಾವಿಸಿ ಆ ಹುಡುಗನನ್ನು ತ್ರುಪ್ಪನ ಉತ್ತರಾಧಿಕಾರಿಯೆಂದು ಜನ ಸ್ವೀಕರಿಸಿದರು. ಅಂದಿನಿಂದ ಈ ಧಾರ್ಮಿಕ ಗುರು ಅವತಾರಪುರುಷನೆಂಬ ಭಾವನೆ ಉಂಟಾಯಿತು. ಸೋ ನಮ್ ಗ್ಯಾಟ್ಸೋಗೆ ಮಂಗೋಲರ ನಾಯಕ ಅಲ್ತನ್‍ಖಾನ್ ದಲೈ ಲಾಮ ಎಂಬ ಬಿರುದನ್ನಿತ್ತ. ಅಂದಿನಿಂದ ಈ ಧಾರ್ಮಿಕ ಗುರುವಿಗೆ ದಲೈ ಲಾಮ ಎಂಬ ಹೆಸರೇ ಬಂದಿತು. ಲೊಬ್ ಸ್ಯಾಂಗ್ ಗ್ಯಾಟ್ಸೊ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಹಿಂದಿನ ಧಾರ್ಮಿಕ ಪರಂಪರೆಗೆ ಸೇರಿದ ಪಂಗಡದವರೊಂದಿಗೆ ಹೋರಾಡಬೇಕಾಯಿತು. ಆತ ಇದಕ್ಕಾಗಿ ಮಂಗೋಲರನೆರವನ್ನು ಪಡೆದ. ಕೆಂಪುಟೋಪಿ ಪಂಗಡದವರನ್ನು ಹಿಮ್ಮೆಟ್ಟಿಸಿದ. ಆ ಬಳಿಕ ಟಿಬೆಟ್ಟಿನ ಒಡೆತನ ಈ ದಲೈ ಲಾಮನಿಗೆ ದೊರಕಿತು. ಲ್ಹಾಸದಲ್ಲಿ ಪೊಟಾಲ ಅರಮನೆಯನ್ನು ಕಟ್ಟಿಸಲು ಅಸ್ತಿಭಾರ ಹಾಕಿದವನು ಈತನೇ.

ದಲೈ ಲಾಮನನ್ನು ಟಿಬೆಟ್ ದೇಶದಲ್ಲಿ ಬೋಧಿಸತ್ತ್ವನೆಂದು ಭಾವಿಸಿ ಪೂಜಿಸುವ ಪಧÀ್ಧತಿ ಬೆಳೆಯಿತು. ನಿರ್ವಾಣ ಪದವಿಗೆ ಏರಿದರೂ ಸಮಾಜ ಕಲ್ಯಾಣಕ್ಕಾಗಿ ಪುನಃ ಅವತಾರವನ್ನು ತಾಳುವವರು ಬೋಧಿಸತ್ತ್ವರು. ಟಿಬೆಟ್ಟಿನ ದಲೈ ಲಾಮಗಳು ಪ್ರಜೆಗಳ ಅರಸರೂ ಧಾರ್ಮಿಕ ಗುರುಗಳೂ ಆಗಿದ್ದರು. ರಾಜಕೀಯ ಮತ್ತು ಧಾರ್ಮಿಕ ಅಧಿಕಾರಗಳು ಅವರಲ್ಲಿ ಕೇಂದ್ರೀಕೃತವಾಗಿದ್ದುವು. ಐದನೆಯ ದಲೈ ಲಾಮ ಅಧಿಕಾರಕ್ಕೆ ಬಂದಾಗ ಈ ಅವತಾರದ ಸಿದ್ಧಾಂತಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರಕಿತು. ಒಬ್ಬ ದಲೈ ಲಾಮ ಮರಣ ಹೊಂದುವ ಮೊದಲು ಮುಂದೆ ಇಂತಹ ಕಡೆ ಅವತಾರ ಹೊಂದುವುದಾಗಿ ತಿಳಿಸುತ್ತಿದ್ದ. ಅದಕ್ಕಾಗಿ ಕೆಲವು ಗುರುತುಗಳನ್ನು ಸೂಚಿಸುತ್ತಿದ್ದ. ಆತ ನಿಧನನಾದ 3-4 ವರ್ಷಗಳ ಬಳಿಕ ಸೇರಾ, ದ್ರೆಪುಂಗ್, ಗಂಡೆನ್, ನೆಚುಂಗ್ ಮತ್ತು ಸಾಮ್ಯೆಗಳ ಪುರಾತನ ಮಠಗಳ ಸಂನ್ಯಾಸಿಗಳ ಮುಂದಿನ ದಲೈ ಲಾಮ ಜನಿಸಿರಬಹುದಾದ ಸ್ಥಳವನ್ನು ಹುಡುಕುತ್ತಿದ್ದರು. ಅವರೇ ಆತನನ್ನು  ಆರಿಸುತ್ತಿದ್ದರು. ಆತನನ್ನು ಲಾಸದ ಪೊಟಾಲ ಅರಮನೆಗೆ ಕರೆತಂದು ಅಲ್ಲಿ ಆತನ ವಿದ್ಯಾಭ್ಯಾಸಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಲಾಗುತ್ತಿತ್ತು. 18 ವರ್ಷಗಳು ತುಂಬಿದ ಬಳಿಕ ಹೊಸ ದಲೈ ಲಾಮ ತನ್ನ ಅಧಿಕಾರಸೂತ್ರಗಳನ್ನು ವಹಿಸಿಕೊಳ್ಳುತ್ತಿದ್ದ. ಟಿಬೆಟ್ಟನರು ದಲೈ ಲಾಮನನ್ನು ಅಮೂಲ್ಯರಕ್ಷಕ, ಅಮೂಲ್ಯ ಚಕ್ರವರ್ತಿ ಎಂದು ಅರ್ಥಬರುವ ಕ್ಯಮ್ ಗೋನ್ ರಿಂ-ಪೋ-ದೆ, ಗ್ಯೆ ವಾ-ರಿಂ-ಪೋ ಚೆ ಎಂದು ಕರೆಯುತ್ತಾರೆ. ದಲೈ ಲಾಮ (ತಲೆಲಾಮ) ಎಂಬುದು ಮಂಗೋಲರೂ ಚೀನಿಯರೂ ಬಳಸುವ ಪದ.

ದಲೈ ಲಾಮನಿಗೆ ತಾತ್ತ್ವಿಕವಾಗಿ ನಿರಂಕುಶ ಅಧಿಕಾರವಿದ್ದರೂ ಆಚರಣೆಯಲ್ಲಿ ಕೆಲವು ಅಡೆತಡೆಗಳಿದ್ದುವು. ರಾಜನೂ ಗುರುವೂ ಆಗಿದ್ದ ದಲೈ ಲಾಮ ಅಧಿಕಾರಸೂತ್ರಗಳನ್ನು ವಹಿಸುವ ವರೆಗೂ ರಾಜ್ಯಸಭೆಯಿಂದ ನಿಯೋಜಿತನಾದ ರಾಜಪ್ರತಿನಿಧಿ ಆಢಳಿತದ ಹೊಣೆ ಹೊರುತ್ತಿದ್ದ. ಆತನ ಅನಂತರದ ಸ್ಥಾನ ಪ್ರಧಾನಿಯದು. ಈತ ಲೌಕಿಕ ವ್ಯಕ್ತಿ. ಒಬ್ಬನೇ ಪ್ರಧಾನಿಯಿರಬೇಕೆಂಬ ನಿಯಮವಿರಲಿಲ್ಲ. ಆದರೆ ಈತ ಆಡಳಿತ ಸಭೆಯ ಸದಸ್ಯನಾಗಿರಲಿಲ್ಲ. ಆ ಸಭೆ ಮಾಡಿದ ಸಲಹೆಗಳನ್ನು ತನ್ನದೇ ಆದ ಟೀಕೆಗಳೊಂದಿಗೆ ದಲೈ ಲಾಮನಿಗೆ ಕಳುಹಿಸುವ ಕರ್ತವ್ಯ ಈತನದಾಗಿತ್ತು. ಟಿಬೆಟ್ ಸರ್ಕಾರದಲ್ಲಿ ಕಷಗ್ ಎಂಬುದು ಆಡಳಿತ ಸಭೆ. ಇದನ್ನು ಮಂತ್ರಿಮಂಡಲ ಎನ್ನವುದು ಕಷ್ಟ. ಒಬ್ಬೊಬ್ಬ ಮಂತ್ರಿಗೆ ಸೇರಿದಂತೆ ಇಲಾಖೆಗಳನ್ನು ಪ್ರತ್ಯೇಕಿಸಲಾಗಿರಲಿಲ್ಲ. ಅವರದು ಜಂಟಿ ಜವಾಬ್ದಾರಿ. ಅವರು ತಮ್ಮ ಸಲಹೆಗಳನ್ನು ಅನುಮೋದನೆಗೆಂದು ದಲೈ ಲಾಮನಿಗೆ ಸಲ್ಲಿಸುತ್ತಿದ್ದರು. ಆಡಳಿತಸಭೆ ನ್ಯಾಯಮಂಡಲಿಯೂ ಆಗಿತ್ತು.

ಆಡಳಿತಸಭೆಯ ಅಧೀನದಲ್ಲಿ ಹಲವಾರು ವಿಶಿಷ್ಟ ಅಧಿಕಾರಿಗಳಿದ್ದರು. (ತ್ಸಿ-ಪೊನ್). ದೇಶದ ಆದಾಯ-ವೆಚ್ಚಗಳ ಲೆಕ್ಕಪತ್ರಗಳನ್ನಿಡುವ. ಕಂದಾಯಗಳನ್ನು ನಿರ್ಧರಿಸುವ ಹೊಣೆ ಇವರದು. ರಾಜನಿಗೆ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ನೆರವು ನೀಡಲು ಚಿಕ್ಯಾಂಪ್ ಖೆಂಪೊ ಎಂಬ ಸಂನ್ಯಾಸಿ ಇರುತ್ತಿದ್ದ. ಈತ ದಲೈ ಲಾಮನ ಸ್ವಂತ ಖಜಾನೆಯ ಹಾಗೂ ಪೊಟಾಲದ ಖಜಾನೆಯ ಅಧಿಕಾರಿಯಾಗಿದ್ದ. ಯಿಕ್ ಟ್ಸಾಂಗ್ ಎಂಬುದು ನಾಲ್ವರು ಸಂನ್ಯಾಸಿಗಳ ಸಭೆ. ಮಠಗಳ ಆಡಳಿತದ ಹೊಣೆಯನ್ನು ಇವರು ಹೊತ್ತಿದ್ದರು. ಇವರು ರಾಷ್ಟ್ರೀಯ ಸಭೆಯ ಅಧ್ಯಕ್ಷಸ್ಥಾನ ವಹಿಸುತ್ತಿದ್ದರು. ರಾಷ್ಟ್ರೀಯ ಸಭೆ ಅವಶ್ಯವಿದ್ದಾಗ ಮಾತ್ರ ಸೇರುತ್ತಿತ್ತು. ಇದು ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸಲು ರೂಪಿತವಾಗಿದ್ದ ಸಭೆ. ಉನ್ನತ ಅಧಿಕಾರಿಗಳು, ಲಾಸದ ಮಠಗಳಲ್ಲಿಯ ಸಂನ್ಯಾಸಿಗಳ ಪ್ರತಿನಿಧಿಗಳು ಈ ಸಭೆಯ ಸದಸ್ಯರಾಗಿದ್ದರು. ದಲೈ ಲಾಮ ನಿಧನಹೊಂದಿದಾಗ ಇನ್ನೊಬ್ಬನನ್ನು ಆ ಸ್ಥಾನಕ್ಕೆ ಆರಿಸುವ ವರೆಗೆ ರಾಜಪ್ರತಿನಿಧಿಯಾಗಿ ಆಳಬೇಕಾಗಿದ್ದವನನ್ನು ನೇಮಿಸುವ ಅಧಿಕಾರ ಈ ಸಭೆಗೆ ಇತ್ತು.
ಐದನೆಯ ದಲೈ ಲಾಮನಿಗೆ ಕೋಕೋ ನೋರ್ ಪ್ರದೇಶದ ಮಂಗೋಲರ ನಾಯಕನಾದ ಗುಸ್ರಿಖಾನನ ಬೆಂಬಲವಿತ್ತು. ಚೀನದಲ್ಲಿ ಆಗ ಮಾಂಚೂಗಳು ಕ್ರಮೇಣ ಪ್ರಾಬಲ್ಯಕ್ಕೆ ಬರುತ್ತಿದ್ದರು. ಗುಸ್ರಿಖಾನ ಮಾಂಚೂಗಳೊಂದಿಗೆ ರಾಜಕೀಯ ಸಂಬಂಧ ಹೊಂದಿದ್ದ. ಗುಸ್ರಿಖಾನನ ಅಧೀನಕ್ಕೆ ಟಿಬೆಟ್ ಬಂದಾಗ ಆತ ಐದನೆಯ ದಲೈ ಲಾಮನನ್ನು ಆ ಪದವಿಗೆ ಏರಿಸಿದ. ಆತ ಬಕುಕಿರುವ ತನಕ (1655) ದಲೈ ಲಾಮ ಆತನ ಆಜ್ಞಾಧಾರಕನಂತಿದ್ದ. ಆದರೆ ಅನಂತರ ದಲೈ ಲಾಮ ಟಿಬೆಟ್ಟಿನ ವ್ಯವಹಾರಗಳಲ್ಲಿ ಸಂಪೂರ್ಣ ಸ್ವಾತಂತ್ರ್ಯ ಪಡೆದ. ಈತ ಒಂದು ಕಡೆ ಚೀನದ ಮಾಂಚೂಗಳನ್ನೂ, ಇನ್ನೊಂದು ಕಡೆ ಮಂಗೋಲರನ್ನೂ ಅನುಸರಿಸಿದ. ಆದರೆ 1682ರಲ್ಲಿ ಈ ದಲೈ ಲಾಮ ಮರಣಹೊಂದಿದಾಗ ಈತನ ಪ್ರಧಾನಿಯಾಗಿದ್ದ ಸಾಂಗ್ಯೆ ಗ್ಯಾಟ್ಸೊ ದಲೈ ಲಾಮನ ನಿಧನದ ವಾರ್ತೆಯನ್ನು ಮುಚ್ಚಿಟ್ಟು ಆಡಳಿತದ ಸೂತ್ರಗಳನ್ನು ಸ್ವತಃ ವಹಿಸಿದ. ಆದರೆ ಮಂಗೋಲ ಲ್ಹಾಬ್ಜಾಂಗ್ ಖಾನದ ಇದನ್ನು ಸಹಿಸಲಿಲ್ಲ. ಆತ ಚೀನದ ಚಕ್ರವರ್ತಿ ಕಾಂಗ್ ಹ್ಸಿಯ ನೆರವನ್ನು ಪಡೆದು ಸಾಂಗ್ಯೆ ಗ್ಯಾಟ್ಸೊನನ್ನು ಸೋಲಿಸಿ ತಾನೇ ಆರಿಸಿದ ಒಬ್ಬ ಲಾಮನನ್ನು ಟಿಬೆಟ್ಟಿನ ಕಲೈ ಎಂದು ನೇಮಿಸಿದ. ಆದರೆ ಟಿಬೆಟ್ಟಿನ ಪ್ರಜೆಗಳು ಇದನ್ನು ಮಾನ್ಯ ಮಾಡಲಿಲ್ಲ. ಕಾಂಗ್ ಹ್ಸಿ ಈ ಪರಿಸ್ಥಿತಿಯ ಪ್ರಯೋಜನ ಪಡೆದು ಟಿಬೆಟ್ ಜನರ ಕೋರಿಕೆಯನ್ನು ಮಾನ್ಯವಾಡಿ ಲ್ಹಾಬ್ಜಾಂಗನನ್ನು ಹೊರದೂಡಿದ. ಈ ವೂಲಕ ಚೀನದ ಚಕ್ರವರ್ತಿ ಟಿಬೆಟ್ಟಿನ ರಾಜಕೀಯದಲ್ಲಿ ಪ್ರವೇಶಿಸಿದ. ಲಾಸದಲ್ಲಿ ತನ್ನ ಸೈನ್ಯದ ಒಂದು ತುಕೆಇಯನ್ನು ನಿಲ್ಲಿಸಿದ. ದಲೈ ಲಾಮನ ಪ್ರಭಾವ ಕುಗ್ಗಿತು. ಟಿಬೆಟ್ಟಿನ ಆಡಳಿತ ನಿರ್ವಹಿಸಲು ಆಂಬನರನ್ನು ಚೀನೀ ಚಕ್ರವರ್ತಿ ನೇಮಿಸಿದ. ಪೋಲ ತೇಜಿ ಎಂಬಾತ ನೂತನ ಆಡಳಿತಾಧಿಕಾರಿಯಾದ. ಈತ ವಿಚಕ್ಷಣೆಯಿಂದ ಆಡಳಿತ ಸೂತ್ರಗಳನ್ನು 18 ವರ್ಷಗಳ ಕಾಲ ನಿರ್ವಹಿಸಿ ಮಾಂಚೂ ಅರಸರು ನಾಮಮಾತ್ರಕ್ಕೆ ಟಿಬೆಟ್ಟಿನ ಪ್ರಭುಗಳಾಗಿರುವಂತೆ ಮಾಡಿದ. ಈ ಸಮಯದಲ್ಲೇ ದಲೈ ಲಾಮನ ಪ್ರತಿಸ್ಪರ್ಧಿ ಎನ್ನಿಸುವಂತೆ ಪಂದೆನ್ ಲಾಮನನನು ನಿಯಮಿಸುವ ಪದ್ಧತಿ ಆರಂಭವಾಯಿತು. ಪೋಲ ತೇಜ 1747ರಲ್ಲಿ ನಿಧನಹೊಂದಿದ. ಆತನ ಮಗ ಗ್ಯುರ್ಮೆ ನಂಗ್ಯಾಲ್ ಊತ್ತರಾಧಿಕಾರಿಯಾದ. ಆದರೆ ಆತ ತಂದೆಯ ನೀತಿಯನ್ನು ಪಾಲಿಸದೆ ಚೀನೀ ಅಧಿಕಾರಿಗಳೊಂದಿಗೆ ವೈರ ಕಟ್ಟಿಕೊಂಡ. ಅಂಬೆನರು ಗ್ಯುರ್ಮೆಯನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಕೊಲೆಮಾಡಿದರು. ಆಗ ಚೀನೀ ಚಕ್ರವರ್ತಿ ಚಿಯೆನ್ ಲುಂಗ್ ಮತ್ತೊಮ್ಮೆ ಟಿಬೆಟ್ಟಿನ ರಾಜಕೀಯದಲ್ಲಿ ಪ್ರವೇಶಿಸಿದ. ಇದರ ಪರಿಣಾಮವಾಗಿ ಮತ್ತೊಮ್ಮೆ ದಲೈ ಲಾಮ ತನ್ನ ಹಿಂದಿನ ಅಧಿಕಾರಗಳನ್ನು ಪಡೆಕುಕೊಂಡ. ಈತ ಏಳನೆಯ ದಲೈ ಲಾಮ ಕೆಸಂಗ್ ಗ್ಯಾಟ್ಸೊ. ಈತ 1757ರಲ್ಲಿ ನಿಧನ ಹೊಂದಿದ. ಆನಂತರ ಬಂದ ದಲೈ ಲಾಮಗಳು ತಮ್ಮ ಪ್ರತಿನಿಧಿಗಳಿಗೇ ಅಧಿಕಾರ ದಹಿಸಿಕೊಟ್ಟರು. ಸುಮಾರು 120 ವರ್ಷಗಳ ಕಾಲ ಈ ಪರಿಸ್ಥಿಸಿ ಮುಂದುವರಿಯಿತು. ಏದನೆಯ ದಲೈ ಲಾಮ ತನ್ನ ಗುರು ಲೊಬ್ಜಾಂಗ್ ಜೋಕ್ಯಿ ಗ್ಯಾಲ್ಟೆಸೆನ್ ನನ್ನು ಟಾಷಿಲುಂಪೊ ಮಠದ ಸಂನ್ಯಾಸಿಯಾಗಿ ನೇಮಿಸಿ, ಆತ ಧ್ಯಾನಿ ಬುದ್ಧ ಅಮಿತಭನ ಅವತಾರವೆಂದು ಘೋಷಿಸಿದ್ದ. ಈತನೇ ಪಂಚೆನ್ ಲಾಮ ಎನಿಸಿಕೊಂದ. ದಲೈ ಲಾಮನ ಗುರುವಿನ ಸ್ಥಾನದಲ್ಲಿದ್ದ ಈತ ಸಹಜವಾಗಿಯೇ ಲೌಕಿಕ ವಿಷಯಗಳೊಡನೆ ಯಾವ ಸಂಬಂಧವನ್ನೂ ಹೊಂದಿರೆದೆ, ಆಧ್ಯಾತ್ಮಿಕವಾಗಿ ದಲೈ ಲಾಮನಿಗಿಂತ ಉನ್ನತ ಮಟ್ಟದಲ್ಲಿರುವವನೆಂದು ಭಾವಿಸಲಾಗಿತ್ತು.

ಈ ಮಧ್ಯೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಆರಂಭವಾಗಿತ್ತು. ವಾರನ್ ಹೇಸ್ಟಿಂಗ್ಸ್ ಟಿಬೆಟ್ಟಿನೊಡನೆ ವಾಣಿಜ್ಯ ಸಂಪರ್ಕಗಳನ್ನು ಬೆಳೆಸಲು ಯತ್ನಿಸಿದ. ಅದಕ್ಕಾಗಿ ಜಾರ್ಜ್ ಬೋಗ್ಲ್ ಎಂಬ ಅಧಿಕಾರಿಯನ್ನು ಭೂತಾನದ ಮೂಲಕ ಟಿಬೆಟ್ಟಿಗೆ ಕಳಿಸಿದ. ಆತ ಪಂಚೆನ್ ಲಾಮನನ್ನು ಟಾಷಿ ಲುಂಪೋದಲ್ಲಿ ಕಂಡು ಅವನೊಡನೆ ವ್ಯವಹಾರಗಳನ್ನು ಕುರಿತು ಚರ್ಚಿಸಿದ. 1788ರಲ್ಲಿ ನೇಪಾಳದ ಗೂರ್ಖರು ಟಿಬೆಟ್ಟಿನ ಜಿûಕಾಟ್ಸೆಯನ್ನು ಮುತ್ತಿದರು. ಆದರೆ ಮಾಂಚೂ ಅರಸರು ಅವರನ್ನು ಹೊರದೂಡಿದರು (1792). 1855ರಲ್ಲಿ ಇನ್ನೊಮ್ಮೆ ಗೂರ್ಖರು ಟಿಬೆಟ್ಟನ್ನು ಮುತ್ತಿದಾಗ ಟಿವೆಟ್ಟನಲ್ಲಿ ಮಾಂಚೂಗಳ ಪ್ರಭಾವ ಕಡಿಮೆಯಾಗಿದ್ದ ಕಾರಣ ಗೂರ್ಖರು ಜಯಶೀಲರಾದರು. ಟಿಬೆಟ್ ಸರ್ಕಾರ 10,000 ರೂಪಾಯಿಗಳನ್ನು ಪ್ರತಿವರ್ಷವೂ ಗೂರ್ಖರಿಗೆ ಕೊಡಬೇಕೆಂಬ, ಗೂರ್ಖ ವರ್ತಕರಿಂದ ಸುಂಕಗಳನ್ನು ಪಡೆಯಬಾರದೆಂಬ ಒಪ್ಪಂದವಾಯಿತು.

ಲಾರ್ಡ್ ಕಜರ್ûನ್ 1904ರಲ್ಲಿ ಪ್ರಾನ್ಸಿಸ್ ಯಂಗ್ ಹಸ್ಬೆಂಡ್ ನೇತೃತ್ವದಲ್ಲಿ ಸೈನ್ಯವೊಂದನ್ನು ಟಿಬೆಟ್ಟಿನ ಮೇಲೆ ಕಳಿಸಿದ. 13ನೆಯ ದಲೈ ಲಾಮ ಆಗ ಟಿಬೆಟ್ಟಿನಿಂದ ಬೀನಕ್ಕೆ ಓಡಿಹೋದ. ಆದರೆ ಬ್ರಿಟಿಷ್ ಸರ್ಕಾರ ಕಜರ್ûನನ ಈ ನೀತಿಯನ್ನು ಅನುಮೊಡಿಸಲಿಲ್ಲ. ದೀನ ದೇಶಕ್ಕೆ ಟಿಬಟ್ ಮೇಲೆ ಪ್ರಭುತ್ವವಿದೆ ಎಂಬುದನ್ನು ಒಪ್ಪಿತು. ಆಂತರಿಕ ಆಡಳಿತಗಳಲ್ಲಿ ಮಾತ್ರ ಟಿಬೆಟ್ ಸ್ವತಂತ್ರವೆಂದು ಬ್ರಿಟನ್ ಭಾವಿಸಿತು.

1911ರಲ್ಲಿ ಬೀನದಲ್ಲಿ ನಡೆದ ಕ್ರಾಂತಿಯ ಪರಿಣಾಮವಾಗಿಟಿಬೆಟ್ಟಿನ ಇತಿಹಾಸದಲ್ಲಿ ನೂತನ ಘಟ್ಟವೊಂದು ಆರಂಭವಾಯಿತು. ದಲೈ ಲಾಮ ಚೀನದೊಡನೆ ತನ್ನ ಸಂಬಂಧಗಳನ್ನು ಕಡಿದುಕೊಂಡು. ಬ್ರಿಟನ್ ಹಾಗೂ ರಷ್ಯ ದೇಶಗಳೊಡನೆ ಹೊಸ ಬಾಂಧವಯ ಬೆಳೆಸಬೇಕೆಂದೂ ಸ್ವತಂತ್ರವಾಗಿರಬೇಕೆಂದೂ ಯೊಚಿಸಿದ. ಆದರೆ ಬ್ರಿಟನ್ ಇದಕ್ಕೆ ಬೆಂಬಂಲ ನೀಡಲಿಲ್ಲ. ಚೀನಿ ಗಣರಾಜ್ಯ ಟಿಬೆಟ್ಟಿನ 13ನೆಯ ದಲೈಯನ್ನು ದಲೈ ಲಾಮನೆಂದು ಮಾನ್ಯವಾಡಿತಯ. 1913ರಲ್ಲಿ ಬ್ರಿಟನ್, ಚೀನ ಹಾಗೂ ಟಿಬೆಟ್ ಪ್ರತಿನಿಧಿಗಳು ಸಿಮ್ಲಾದಲ್ಲಿ ಸಭೆಸೇರಿದರು. ಹೆನ್ರಿಕ್ ಮ್ಯಾಕ್‍ಮೋಹನ್ ಇದರ ಅಧ್ಯಕ್ಷತೆ ವಹಿಸಿದ. ಚೀನ-ಟಿಬೆಟ್ ಗಳ ನಡುವಣ ಹಾಗೂ ಭಾರತ-ಟಿಬೆಟ್ ನಡುವಣ ಮೇರೆಗಳನ್ನು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಚೀನ ಈ ಒಪ್ಪಂದವನ್ನು ಅನುಮೋದಿಸಲಿಲ್ಲ. ದಲೈ ಲಾಮ ಹಾಗೂ ಪಂಚೆನ್ ಲಾಮಗಳ ನಡುವಣ ಭಿನ್ನಾಭಿಪ್ರಾಯವೂ ಇದಕ್ಕೊಂದು ಕಾರಣವಾಯಿತು. 9ನೆಯ ಪಂಚೆನ್ ಲಾಮ ಚೀನಕ್ಕೆ ಓಡಿಹೋದ. ಜನರಲ್ ಚಿಯಾಂಗ್ ಕೈ-ಷೆಕ್ ಟಿಬೆಟ್ಟನ್ನು ಚೀನದ ಭಾಗವೆಂದು ಘೋಷಿಸಿ ಅದನ್ನು ವಶಪಡಿಸಿಕೊಳ್ಳಲು ಯತ್ನಿಸಿದ. ಆದರೆ ಇದೂ ಫಲಿಸಲಿಲ್ಲ. 1947ರಲ್ಲಿ ಭಾರತ ಸ್ವತಂತ್ರವಾದಾಗ ಟಿಬೆಟ್ಟಿನಲ್ಲಿದ್ದ ಬ್ರಿಟಿಷ್ ಕಚೇರಿ ಭಾರತದ ಕಚೇರಿಯಾಗಿ ಮಾರ್ಪಟ್ಟಿತು. ಅಂದಿನಿಂದ ಬ್ರಿಟನಿನ ಸ್ಥಾನದಲ್ಲಿ ಭಾರತ ಟಿಬೆಟ್ಟಿನೊಡನೆ ವ್ಯವಹಾರಗಳನ್ನು ಮುಂದುವರಿಸಿತು. 1949ರಲ್ಲಿ ಚೀನದಲ್ಲಿ ಕಮ್ಯೂನಿಸ್ಟ್ ಸರ್ಕಾರ ಸ್ಥಾಪಿತವಾಯಿತು. ಇದು ಟಿಬೆಟ್ಟನ್ನು ಚೀನದೊಡನೆ ವಿಲೀನಗೊಳಿಸುವ ಹಂಚಿಕೆ ಹೂಡಿತು. ಟಿಬೆಟ್ಟಿನ ಎಲ್ಲ ಪ್ರದೇಶಗಳಿಗೂ ರಸ್ತೆಗಳನ್ನು ನಿರ್ಮಿಸುವ ಕಾರ್ಯವನ್ನೂ ಮಾಡದ ಟಿಬೆಟ್ಟಿನ ಎಲ್ಲ ಪ್ರಜೆಗಳನ್ನೂ ಕಾರ್ಯೋನ್ಮುಖರಾಗುವಂತೆ ಮಾಡಿತು. ಪರಂಪರಾನುಗತವಾಗಿ ಬೆಳೆದು ಬಂದಿದ್ದ ಪದ್ಧತಿಗಳನ್ನು ತ್ಯಜಿಸಿ, ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ಸುಧಾರಣೆಗಳನ್ನು ಜಾರಿಗೆ ತರಲಾಯಿತು. ಇದರ ಪರಿಣಾಮವಾಗಿ ಹಲವರು ದಂಗೆ ಎದ್ದರು. ಚೀನೀ ಸರ್ಕಾರ ಆ ದಂಗೆಯನ್ನು ಅಡಗಿಸಬೇಕೆಂದು ದಲೈ ಲಾಮಗೆ ಆದೇಶ ನೀಡಿತಾದರೂ ದಲೈ ಅದಕ್ಕೆ ಒಪ್ಪಲಿಲ್ಲ. ಚೀನೀ ಸರ್ಕಾರ ದಲೈ ಲಾಮನ ನಿವಾಸವನ್ನೂ ದ್ರೆಪುಂಗ್ ಮತ್ತು ಸೆರಾ ಸಂಘಗಳನ್ನೂ ಮುತ್ತಿ ಹಾನಿ ಉಂಟು ಮಾಡಿತು. ದಲೈ ಲಾಮ ತನ್ನ ಪರವಾರದೊಂದಿಗೂ ಮೂವರು ಸಂಪುಟ ದರ್ಜೆಯ ಮಂತ್ರಿಗಳು ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೂ ಭಾರತಕ್ಕೆ ಓಡಿಹೋದರು.ಭಾರತ ಸರ್ಕಾರ ಅವರಿಗೆ ರಾಜಕೀಯ ಆಶ್ರಯು ನೀಡಿತು. ಚೀನೀ ಸರ್ಕಾರ ಲಾಸದ ಸರ್ಕಾರವನ್ನು ಅಂತ್ಯಗೊಳಿಸಿ ಪಂಚೆನ್ ಲಾಮನನ್ನು ಪೀಕಿಂಗಿನ ರಾಷ್ಟ್ರೀಯ ಪ್ರಜಾಸರ್ಕಾರದ ಉಪಾಧ್ಯಕ್ಷರನಾಗಿ ನೇಮಿಸಿ ಲಾಸಕ್ಕೆ ಕಳುಹಿಸಿತು (1959). ವಿಶ್ವಸಂಸ್ಥೆ ಚೀನೀ ಸರ್ಕಾರದ ಈ ಕ್ರಮವನ್ನು ಖಂಡಿಸಿತಾದರೂ ಅದರಿಂದ ಏನೂ ಪರಿಣಾಮ ಆಗಲಿಲ್ಲ. ಟಿಬೆಟ್ಟು ಚೀನೀ ಸಮಾಜವಾದಿ ಗಣರಾಜ್ಯದ ಸ್ವಯಮಾಡಳಿತ ಪ್ರದೇಶವಾಯಿತು.
(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ